ವಿಸ್ಮಯ
ವೈದ್ಯಕೀಯ ಮತ್ತು ತಂತ್ರಜ್ಞಾನ ಒಟ್ಟಿಗೆ ಸೇರಿದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿ, ದಿನಾಂಕ ಮೇ 18, 2026 ರಂದು ಭಾರತೀಯ ವೈದ್ಯರೊಬ್ಬರು ಚೀನಾದ ವುಹಾನ್ ನಗರದಲ್ಲಿ ಕುಳಿತು, ಸುಮಾರು 3900 ಕಿಲೋಮೀಟರ್ ದೂರದ ಹೈದರಾಬಾದ್ ನ ಮೂತ್ರನಾಳದ ಸಮಸ್ಯೆಯಿಂದಾ ಬಳಲುತ್ತಿದ್ದ ರೋಗಿಯೊಬ್ಬರಿಗೆ 5G ಇಂಟರ್ನೆಟ್ ಜಾಲ ಹಾಗೂ ಅತ್ಯಾಧುನಿಕ ರೋಬೋಟ್ ಬಳಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಅಪರೂಪದ ಶಸ್ತ್ರ ಚಿಕಿತ್ಸೆ ವೈದ್ಯಕೀಯ ಲೋಕದ ಹೊಸ ಮೈಲುಗಲ್ಲಾಗಿ ಪರಿಣಮಿಸಿದೆ.
ಯಾರು ಈ ದಿಟ್ಟ ವೈದ್ಯ?
ಇವರ ಹೆಸರು ಡಾ. ಸೈಯದ್ ಮೊಹಮ್ಮದ್ ಗೌಸ್, ಇವರು ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿರುವ ಪ್ರಸಿದ್ಧ “ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಅಂಡ್ ಯುರಾಲಜಿ” (Asian Institute of Nephrology and Urology – AINU) ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರಾಗಿದ್ದಾರೆ. ಇವರು ಚೀನಾದ ವುಹಾನ್ ನಗರದಲ್ಲಿನ “ಟೋಂಗ್ಜಿ ಆಸ್ಪತ್ರೆಯಲ್ಲಿ” ನಡೆಯುತ್ತಿದ್ದ ಅಂತರರಾಷ್ಟ್ರೀಯ ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದರು. ಆದರೆ ಇವರ ರೋಗಿ ಹೈದರಬಾದ್-ನಲ್ಲಿ ಇದ್ದರು.
ದೀರ್ಘ ಶಸ್ತ್ರಚಿಕಿತ್ಸೆ ನಡೆದದ್ದು ಹೇಗೆ?
ಹೈದರಬಾದ್ ನ AINU ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರಿಗೆ Ureteric Reimplantation, ಅಂದರೆ ಮೂತ್ರಪಿಂಡದಿಂದ ಮೂತ್ರಕೋಶಕ್ಕೆ ಬರುವ ಟ್ಯೂಬ್ಗಳನ್ನು (ಮೂತ್ರನಾಳ) ಸರಿಪಡಿಸಿ, ಮೂತ್ರಕೋಶಕ್ಕೆ ಹೊಸದಾಗಿ ಜೋಡಿಸುವ ಶಸ್ತ್ರಚಿಕಿತ್ಸೆ. ಡಾ. ಸೈಯದ್ ಮೊಹಮ್ಮದ್ ಗೌಸ್ ಅವರು ವುಹಾನ್ ನಲ್ಲಿರುವ ಮಾಸ್ಟರ್ ಕನ್ಸೋಲ್-ನ (ನಿಯಂತ್ರಣ ಯಂತ್ರ) ಮುಂದೆ ಕುಳಿತು ಜಾಯ್-ಸ್ಟಿಕ್ ಹಿಡಿದು ಅದರ ಮೂಲಕ ನೀಡಿದ ಕಮಾಂಡ್ ಹಾಗು ಸೂಕ್ಷ್ಮ ಕೈ ಚಲನೆಗಳನ್ನು ಹೈದರಬಾದಿನ AINU ನಲ್ಲಿ ಇದ್ದ ರೋಬೋಟ್ 5G ತಂತ್ರಜ್ಞಾನ ಬಳಸಿ, ಡಾಕ್ಟರ್-ನ ಕೈ ಚಲನೆಯನ್ನು ಕರಾರುವಕ್ಕಾಗಿ ನಕಲು ಮಾಡಿ ಶಸ್ತ್ರಚಿಕಿತ್ಸೆಯನ್ನು 90 ನಿಮಿಷಗಳಲ್ಲಿ ಬಹಳ
ಯಶಸ್ವಿಯಾಗಿ ಮುಗಿಸಿತು, ಖುಷಿಯ ವಿಚಾರವೆಂದರೆ ಆ ರೋಗಿ ಅಂದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋದರು.
ಯಾವ ರೋಬೋಟ್ ಬಳಸಲಾಗಿತ್ತು?
ಈ ಶಸ್ತ್ರಚಿಕಿತ್ಸೆಗೆ ಬಳಕೆಯಾಗಿದ್ದು, ಚೀನಾದ ಮೈಕ್ರೋಫೋರ್ಟ್ ಮೆಡ್ಬಾಟ್ ಸಂಸ್ಥೆ ಅಭಿವೃದ್ಧಿಪಡಿಸಿರುವ “ಟೂಮೈ ಲ್ಯಾಪ್ರೋಸ್ಕೋಪಿಕ್ ಸರ್ಜಿಕಲ್ ರೋಬಾಟ್” (Toumai Laparoscopic Surgical Robot) ಎಂಬ ಅತ್ಯಾಧುನಿಕ ರೋಬೋಟ್. ಹೈದರಾಬಾದ್ನ AINU ಆಸ್ಪತ್ರೆಯು ಈ ರೋಬೋಟ್ ಅನ್ನು ಬಹಳ ಹಿಂದೆಯೇ ಖರೀದಿಸಿ ತನ್ನ ಆಸ್ಪತ್ರೆಯಲ್ಲಿ ಸೇವೆಗಾಗಿ ಇರಿಸಿತ್ತು.
ಸಹಾಯಕ್ಕೆ ಬಂದ 5G ತಂತ್ರಜ್ಞಾನ.
ಚೀನಾದ ಕಂಟ್ರೋಲ್ ಸೆಂಟರ್ ನಿಂದ ರವಾನಿಸಿದ ಸಿಗ್ನಲ್ ರೋಬೋಟ್ ತಲುಪಿ, ರೋಬಾಟ್ ಮಾಡುವ ಹ್ಯಾಂಡ್ ಮೂವ್-ಮೆಂಟ್ ನ ಸಿಗ್ನಲ್ ಮತ್ತು ಕೆಲಸದ ವೀಡಿಯೋ ಹಿಂತಿರುಗಿ ಮಾಸ್ಟರ್ ಕನ್ಸೋಲ್-ಗೆ ತಲುಪಬೆಕಿತ್ತು. ಇದಕ್ಕೆ ನೆರವಿಗೆ ಬಂದಿದ್ದು ಇಂದಿನ 5G ಟೆಕ್ನಾಲಜಿ, ಸುಮಾರು 200ಮಿಲಿ ಸೆಕೆಂಡ್ ಒಳಗಿನ ಲೇಟೆನ್ಸಿ, ಲೇಟೆನ್ಸಿ ಎಂದರೆ ಸಿಗ್ನಲ್ ಹೋಗಿ ತಲುಪಿ ಮತ್ತು ಹಿಂತಿರುಗಿ ಬಂದು ಸೇರುವ ಸಮಯ. ಅಂದರೆ ಕಣ್ಣು ಮುಚ್ಚಿ ಬಿಡುವಷ್ಟರೊಳಗೆ ಸಿಗ್ನಲ್ ಭಾರತ ಮತ್ತು ಚೀನದ ನಡುವೆ ಸಂವಹನ ನಡೆಸುತ್ತಿತ್ತು.
ಮುಂಜಾಗ್ರತೆ.
ಒಂದುವೇಳೆ ಇಂಟರ್-ನೆಟ್ ಕಟ್ ಆದರೆ ಎಂದು, ಹೈದರಬಾದ್ ನ AINUನಲ್ಲಿ ಆಪರೇಷನ್ ಥಿಯೇಟರಿನಲ್ಲಿ ತಜ್ಞ ವೈದ್ಯರ ತಂಡ ತಯಾರಾಗಿ ನಿಂತಿತ್ತು. ಆದರೆ ಯಾವುದೇ ತೊಂದರೆ ಇಲ್ಲದೆ ಶಸ್ತ್ರಚಿಕಿತ್ಸೆ ನಡೆದು, ರೋಗಿ ಆರೋಗ್ಯವಾಗಿ ಮನೆಗೆ ಹೋಗಿದ್ದಾರೆ.
ಮುಂದೊಂದು ದಿನ, ಇದು ವೈದ್ಯಕೀಯ ಲೋಕದ ಎಲ್ಲ ತಡೆಗೋಡೆಗಳನ್ನು ಒಡೆಯುತ್ತದೆ. ರಾಷ್ಟ್ರದ, ರಾಜ್ಯ ಗಡಿರೇಖೆಯ ಹಂಗಿಲ್ಲದೇ ವೈದ್ಯಕೀಯ ಸೇವೆ ಮುಂದುವರೆಯಲಿದೆ.
-Bolgwriter

Leave a Reply